    ಮೂಲದೊಡನೆ ಪರಿಶೀಲಿಸಿ

ಏಡಿಗಂತಿ: ದೇಹದ ಯಾವುದೇ ಭಾಗ ಅಥವಾ ಅಂಗದಲ್ಲಿ ಸ್ವತಂತ್ರ್ಯವಾಗಿ ಬೆಳೆಯುವ ಊತಕ. ಇದರಿಂದ ದೇಹಕ್ಕೆ ಯಾವ ಉಪಯೋಗವೂ ಇಲ್ಲ ಅಡೆತಡೆಯಿಲ್ಲದೆ ವರ್ಧಿಸಬಲ್ಲುದು. ಪ್ರಾಥಮಿಕ ಬೆಳೆವಣಿಗೆಯ (ಪ್ರೈಮರಿ ಗ್ರೋತ್) ಸ್ಥಳದಿಂದ ದೂರವಾಗಿ ದೇಹದ ಬೇರೆ ಬೇರೆ ಭಾಗಗಳಲ್ಲಿ ತದ್ರೂಪದ ದ್ವಿತೀಯಕ ಬೆಳೆವಣಿಗೆಗಳನ್ನು ಉಂಟು ಮಾಡಬಲ್ಲುದು (ಕ್ಯಾನ್ಸರ್). ಅರ್ಬುದ ನಳ್ಳಿ, ಜಾಡ್ಯ ಪರ್ಯಾಯ ಪದಗಳು. ಏಡಿಯ ಕಾಲುಗಳಂತೆ ಎಲ್ಲ ದಿಕ್ಕುಗಳಲ್ಲೂ ಹರಡುವುದರಿಂದ ಏಡಿಗಂತಿ ಎಂದು ಹೆಸರಾಗಿದೆ. ಈ ರೋಗಕ್ಕೆ ಬಲಿಯಾದ ವ್ಯಕ್ತಿ ಅತಿ ಶೀಘ್ರವಾಗಿಯೂ ತೀವ್ರವಾಗಿಯೂ ಕ್ಷೀಣಿಸಿ ಕೊನೆಯಲ್ಲಿ ಸಾವಿಗೇ ಒಳಗಾಗುವುದರಿಂದ ಇದನ್ನು ವಿಷಮಗಂತಿ, ವಿಷಮಜಾಡ್ಯ ಎಂದೂ ಕರೆಯುವುದುಂಟು.

ಏಡಿಗಂತಿಯ ವಿಷಮತೆಯ ಮಟ್ಟ ಒಂದೊಂದು ಬಗೆಯದರಲ್ಲೂ ಒಂದೊಂದು ವಿಧ. ಇದನ್ನು ಕೆಳಗಿನ ಅಂಶಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
 1. ಏಡಿಯ ಮೈಯಿಂದ ಸುತ್ತಲೂ ಚಾಚಿ ಹರಡುವ ಕೈಕಾಲುಗಳಂತೆ ಅಕ್ಕಪಕ್ಕದ ಊತಕಗಳ ಬಹುಬಗೆಯ ಆಕ್ರಮಣ.
 2. ಏಡಿಗಂತಿಯನ್ನು ಶಸ್ತ್ರಕ್ರಿಯೆಯಿಂದ ಪುರ್ಣವಾಗಿ ಕತ್ತರಿಸಿ ತೆಗೆದು ಹಾಕಿದೆವೆಂದು ಭಾವಿಸುತ್ತಿರುವಾಗಲೇ ಅಲ್ಲಿ ಉಳಿದಿರಬಹುದಾದ ಕೆಲವೇ ಏಡಿಗಂತಿಕೋಶಗಳ ಪರಿಣಾಮವಾಗಿ ಅದೇ ಜಾಗದಲ್ಲಿ ವ್ಯಾಧಿ ಪುನಃ ತಲೆದೋರುತ್ತದೆ; ಮತ್ತು ಈ ಕೋಶಗಳು ಯಥಾಪ್ರಕಾರ ವೃದ್ಧಿಗೊಳ್ಳುತ್ತವೆ.
 3. ದೇಹದ ಸಹಜ ಊತಕಗಳ ಬೆಳೆವಣಿಗೆಗೆ ಇರುವ ಯಾವ ನಿಯಮ ನಿರ್ಬಂಧಗಳಿಗೂ ಏಡಿಗಂತಿಯ ಕೋಶಗಳು ಬದ್ಧವಾಗಿಲ್ಲ. ವಿಭಜನೆಗೊಂಡು ಇವು ಸ್ವಸಾಮಥರ್ಯ್‌ದಿಂದ ಸ್ವೇಚ್ಚೆಯಾಗಿ ಬೇಗ ಬೇಗ ವಿಪರೀತವಾಗಿ ವೃದ್ಧಿಯಾಗಬಲ್ಲುವು. 
 4. ವ್ಯಾಧಿಯ ವಿಷಮತೆ ತೀವ್ರಗೊಂಡಂತೆ ಏಡಿಗಂತಿಯ ಕೋಶಗಳಿಗೂ ಅದು ಹುಟ್ಟಿದ ಊತಕದ ಕೋಶಗಳಿಗೂ ಇರುವ ಹೋಲಿಕೆ ಕಡಿಮೆ ಆಗುತ್ತದೆ. ಇಷ್ಟು ಮಾತ್ರವಲ್ಲ. ಏಡಿಗಂತಿಯ ಕೋಶಗಳು ಊತಕದ ರಚನೆಯನ್ನಾಗಲೀ ಊತಕದಲ್ಲಿನ ಕೋಶದ ನಮೂನೆಯನ್ನಾಗಲೀ ಪಾಲಿಸುವುದಿಲ್ಲ. ಅವು ಗೋಜುಗೋಜಲಾಗಿ ಬೆಳೆದುಕೊಂಡು ಹೋಗುತ್ತವೆ.
 5. ಬಹುಪಾಲು ಏಡಿಗಂತಿಗಳಿಗೆ ಒಂದೇ ದೇಹದಲ್ಲಿ ಮೂಲಸ್ಥಾನದಿಂದ ಬಲು ದೂರದಲ್ಲಿ ದ್ವಿತೀಯ ಗಂತಿಗಳನ್ನು (ಎಂದರೆ ಪ್ರಾಥಮಿಕ ಗಂತಿಗೂ ದ್ವಿತೀಯಕ ಬೆಳೆವಣಿಗೆಗೂ ಯಾವ ಸಂಬಂಧವೂ ಇಲ್ಲದಂತೆ) ಪ್ರಚೋದಿಸುವ ಶಕ್ತಿಯಿದೆ. ಈ ಶಕ್ತಿಯ ಹೆಸರು ಸ್ಥಾನಾಂತರಿಕೆ (ಮೆಟಾಸ್ಟ್ಯಾಸಿಸ್). ಹಾಲುರಸ ನಾಳಗಳು (ಲಿಂಫ್ಯಾಟಿಕ್ಸ್‌) ರಕ್ತನಾಳಗಳು ಮುಂತಾದ ದೇಹದ ಸಹಜ ಸಾಗುದಾರಿಗಳಲ್ಲೋ ಪೊಳ್ಳುಗಳ ಮೂಲಕವೋ ಏಡಿಗಂತಿಯ ಕೋಶಗಳು ಸಾಗಿ ಹೋಗುವುದರಿಂದ ಇದು ಸಂಭವಿಸುತ್ತದೆ. ಇಂಥ ಕೋಶಗಳು ದೇಹದ ದೂರದೂರದ  ಭಾಗಗಳಲ್ಲಿ ನೆಲೆಗೊಂಡು ಅಲ್ಲಿ ಏಡಿಗಂತಿಯ ತದ್ರೂಪಗಳಾಗಿ ಬೆಳೆಯುತ್ತವೆ. ಈ ಸ್ಥಾನಾಂತರಿಕೆಗಳ ವಿತರಣೆಯನ್ನು-ಎಂದರೆ ದ್ವಿತೀಯಕ ಬೆಳೆವಣಿಗೆಗಳು ಕಾಣಿಸಿಕೊಳ್ಳುವ ಸ್ಥಾನಗಳನ್ನು-ದೇಹದಲ್ಲಿ ಪ್ರಾಥಮಿಕ ಬೆಳೆವಣಿಗೆಯ ಸ್ಥಾನ, ವ್ಯಾಧಿಗ್ರಸ್ಥ ಅಂಗ ಮತ್ತು ಅದಕ್ಕೂ ಹಾಲುರಸ ನಾಳಗಳು, ರಕ್ತ ನಾಳಗಳು, ಸಹಜಸಾಗುದಾರಿಗಳು ಮತ್ತು ದೇಹದ ಪೊಳ್ಳುಗಳು ಇವಕ್ಕೂ ಇರುವ ಸಂಬಂಧದಿಂದ ನಿರ್ಧರಿಸಬಹುದು. 

ಸ್ಥಾನಾಂತರಿಕೆಗಳು ಉಂಟಾಗುವ ಕಾಲ ಸಹ ಬದಲಾಗುತ್ತದೆ. ಕೆಲವು ವಿಧದ ಏಡಿಗಂತಿಗಳಲ್ಲಿ ಪ್ರಾಥಮಿಕ ಬೆಳೆವಣಿಗೆ ಚಿಕ್ಕದು ಮತ್ತು ಗಮನಾರ್ಹವಲ್ಲದುದಾಗಿದ್ದು ಯಾವ ಚಿಹ್ನೆಗಾಳನ್ನಾಗಲೀ ಲಕ್ಷಣಗಳನ್ನಾಗಲೀ ಪ್ರಕಟಪಡಿಸದಿರುವಾಗಲೂ ಸ್ಥಾನಾಂತರಿಕೆಗಳು ಉಂಟಾಗಬಹುದು. ಬೇರೆ ವಿಧದವುಗಳಲ್ಲಿ, ಪ್ರಾಥಮಿಕ ಗಂತಿಯನ್ನು ಶಸ್ತ್ರಚಿಕಿತ್ಸೆಯಿಂದ ನಿರ್ಮೂಲಗೊಳಿಸಿದ ದೀರ್ಘ ಕಾಲಾನಂತರವೂ ಸ್ಥಾನಾಂತರಿಕೆಗಳು ತಲೆದೋರಬಹುದು. ಸ್ಥಾನಾಂತರಿಕೆಗಳು ಒಂದು ಸಲ ತಲೆದೋರಿದ ತರುವಾಯ ಪ್ರಾಥಮಿಕ ಗಂತಿಯನ್ನು 
ಶಸ್ತ್ರಕ್ರಿಯೆಯಿಂದ ನಿರ್ಮೂಲಗೊಳಿಸಿದರೂ ಪ್ರಯೋಜನ ಏನು ಆಗದು. ಏಡಿಗಂತಿ ಖಾಯಿಲೆಯ ಅನಿವಾರ್ಯ ಅಂತಿಮ ಘಟ್ಟವನ್ನು ನಿರ್ಧರಿಸಲು ದ್ವಿತೀಯಕ ಬೆಳೆವಣಿಗೆಗಳು ಬಲು ಸಹಾಯಕಾರಿ ಅಂಶಗಳು.

 ವಿಧಗಳು 
ಎರಡು ಪ್ರಧಾನ ವಿಧದ ಏಡಿಗಂತಿಗಳಿವೆ-ಕಾರ್ಸಿನೋಮ ಮತ್ತು ಸಾರ್ಕೋಮ. 

 ಕಾರ್ಸಿನೋಮ 
ಇದು ಚರ್ಮ, ಲೋಳೆಪರೆಗಳು, ನರಗಳು, ಮಿದುಳು, ಗ್ರಂಥಿಗಳ ತೆರನ ಮೇಲ್ಪರೆಯಿಂದ ಏಳುತ್ತದೆ. ಆದ್ದರಿಂದ ಚರ್ಮ, ಬಾಯಿ, ಒಸಡು, ಉಸಿರ್ನಾಳ, ಫುಪ್ಪುಸಗಳು, ಅನ್ನನಾಳ, ಜಠರ, ಕರುಳುಗಳು, ನಟ್ಟಗರುಳು (ರೆಕ್ಟಂ), ಅಂತಃಸ್ರಾವೀ ಗ್ರಂಥಿಗಳು, ಮೂತ್ರಪಿಂಡ, ಈಲಿ, ಮಾಂಸಲಿ, ಪಿತ್ತಕೋಶ, ಮೂತ್ರಕೋಶ, ಮೊಲೆ, ಜನನಾಂಗಗಳು, ಮಿದುಳು, ನರಗಳು, ಇವಲ್ಲೆಲ್ಲ ಏಳುವ ಏಡಿಗಂತಿಗಳು ಕಾರ್ಸಿನೋಮ.
 ಸಾರ್ಕೋಮ 
ಜೋಡಿಸುವ ಊತಕಗಳು-ಎಂದರೆ ತಂತುಕ (ಫೈಬ್ರಸ್), ಕೊಬ್ಬಿನ, ಸ್ನಾಯುವಿನ, ಮೆಲ್ಲೆಲುಬಿನ (ಕಾರ್ಟಿಲೇಜಿನಸ್), ಎಲುಬಿನ, ಹಾಲು ರಸದ, ರಕ್ತವನ್ನು ತಯಾರಿಸುವ ಊತಕಗಳು-ಇವೇ ಮುಂತಾದವುಗಳಿಗೆ ಬರುವ ವ್ಯಾಧಿ. ಆದ್ದರಿಂದ ಲೋಳೆಪರೆಗಳ, ಚರ್ಮದ ಅಡಿಯ ಅಂಗಗಳಲ್ಲಿ ಇರುವ ತಂತುಕ ಅಲ್ಲದೆ ಕೊಬ್ಬಿನ ಊತಕಗಳು, ಸ್ನಾಯುಗಳು, ಮೆಲ್ಲೆಲುಬುಗಳು, ಮೂಳೆಗಳು, ಹಾಲುರಸ ಗ್ರಂಥಿಗಳು, ತೊರಳೆ (ಸ್ಪ್ಲೀನ್), ಎಲುಬಿನ ಮಜ್ಜೆ (ಬೋನ್ ಮ್ಯಾರ್ರೋ), ರಕ್ತದಲ್ಲಿರುವ ಬಿಳಿಯ ಅಲ್ಲದೆ ಕೆಂಪು ರಕ್ತಗೋಳಕಗಳೇ 
ಮುಂತಾದುವಲ್ಲಿ ಏಳುವ ಏಡಿಗಂತಿಗಳು ಸಾರ್ಕೋಮ.

 ಲಿಂಗ, ವಯಸ್ಸು 
ಏಡಿಗಂತಿ ಏಳುವುದಕ್ಕೆ ಲಿಂಗ, ವಯಸ್ಸುಗಳ ತಾರತಮ್ಯವೇನು ಇರುವ ಹಾಗೆ ತೋರುವುದಿಲ್ಲ. ಆದರೆ ಜಠರ, ಗಂಟಲು ಮತ್ತು ಫುಫ್ಪುಸಗಳ ಏಡಿಗಂತಿ ಗಂಡಸರಲ್ಲಿ ಅಧಿಕ; ಮೊಲೆ ಮತ್ತು ಗರ್ಭಕೋಶಗಳ ಏಡಿಗಂತಿ ಹೆಂಗಸರಲ್ಲಿ ಅಧಿಕ. ಪ್ರಾಯದ ರೀತಿ ಪರಿಶೀಲಿಸಿದಲ್ಲಿ ಸಾರ್ಕೊಮ ಕಡಿಮೆ ವಯಸ್ಸಿನಲ್ಲೂ ಕಾರ್ಸಿನೋಮ ಹೆಚ್ಚು ವಯಸ್ಸಿನಲ್ಲೂ ತಲೆದೋರುವುದು ಕಂಡುಬಂದಿದೆ.

 ಕಾರಣ 
ಕೋಶದ ಬೆಳೆವಣಿಗೆಯಲ್ಲಿ ತಲೆದೋರುವ ಅಕ್ರಮವೇ ಏಡಿಗಂತಿ. ದೇಹದಲ್ಲಿನ ಕೋಶಗಳ ಸಹಜ ಬೆಳೆವಣಿಗೆಯ ಮತ್ತು ವೃದ್ಧಿಯ ನಿಯಮಗಳಿಂದ ಏಡಿಗಂತಿ ಕೋಶಗಳು ಅತೀತವಾಗಿವೆ. ಇವುಗಳ ಬೆಳೆವಣಿಗೆ ಹಾಗೂ ವೃದ್ಧಿ ಸ್ವತಂತ್ರ ಮತ್ತು ಶಾಶ್ವತ. ಇತರ ಕೋಶಗಳ ಜೀವವಸ್ತುಕರಣದ ನಿಯಮಕ್ಕಿಂತ ಇವುಗಳ ನಿಯಮ ಭಿನ್ನವಾಗಿದೆ. ಹೀಗಾಗಿ ಇವು ಅಪರಿಮಿತವಾಗಿ ವೃದ್ಧಿಸಬಲ್ಲುವು. ಇನ್ನು ಗಾತ್ರ, ಆಕಾರ ಹಾಗೂ ಇತರ ಲಕ್ಷಣಗಳಲ್ಲಾದರೋ ಈ ಕೋಶಗಳಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಅವು ಉತ್ಪನ್ನವಾಗುವ ಮೂಲ ಊತಕಗಳ ಕೋಶಗಳಿಗೂ ಏಡಿಗಂತಿ ಕೋಶಗಳಿಗೂ ಯಾವುದೇ ವಿಧಧ ಹೋಲಿಕೆಯೂ ಇಲ್ಲದಿರುವುದಿದೆ. ಕೋಶಗಳಲ್ಲಿ ಏಡಿಗಂತಿಯಿಂದ ಉಂಟಾಗುವ ಈ ಮೂಲಭೂತ ವ್ಯತ್ಯಾಸದ ಕಾರಣವೇನೆಂಬುದು ಗಹನ ಅನ್ವೇಷಣೆ ಮತ್ತು ಸಂಶೋಧನೆಗಳ ವಸ್ತು. ಏಡಿಗಂತಿಗೆ ಇಂಥದೇ ಒಂದು ಕಾರಣ ಎಂದು ಹೇಳುವಂತಿಲ್ಲ; ಇದರ ಬದಲು ಹಲವಾರು ಕಾರಣಗಳ ಪ್ರಭಾವದಿಂದ ಕೋಶಗಳಲ್ಲಿ ಏಡಿಗಂತಿ ತಲೆದೋರುವುದೆಂದು ತಿಳಿದಿದೆ. ಕೋಶದಲ್ಲಿ ನಡೆಯುವ ಜೀವಕ್ರಿಯೆಗಳಲ್ಲಿ ಒಂದು ಮೂಲಭೂತ ವ್ಯತ್ಯಾಸವನ್ನು ಯಾವುದೋ ಒಂದು  ಆರಂಭಿಕಕಾರಕ (ಇನಿಶಿಯೇಟಿಂಗ್ ಏಜೆಂಟ್) ತೊಡಗಿಸಬಹುದು. ಮುಂದೆ ಪ್ರೇರಕಕಾರಕ (ಪ್ರಮೋಟಿಂಗ್ ಏಜೆಂಟ್) ಎಂಬ ಇನ್ನೊಂದು ಕಾರಕ ದೀರ್ಘಕಾಲ ಈ ಕೋಶದ ಮೇಲೆ ಕ್ರಿಯೆ ಎಸಗುವುದು. ಇದರ ಪರಿಣಾಮವಾಗಿ ಮೂಲಭೂತ ವ್ಯತ್ಯಾಸ ಅವಿಪರ್ಯಯವಾಗುತ್ತದೆ (ಇರ್ರಿವರ್ಸಿಬಲ್). ಇಂಥ ಅಂಶಗಳನ್ನು ಅಥವಾ ಕಾರಕಗಳನ್ನು ಏಡಿಗಂತಿಜನಕಗಳೆಂದು (ಕಾರ್ಸಿನೋಜೆನ್ಸ್‌) ಕರೆಯುವುದುಂಟು. ಇವು ಭೌತ, ರಾಸಾಯನಿಕ, ಜೈವಿಕ (ವೈರಸ್ ಮಾದರಿಯ ಅತಿಸೂಕ್ಷ್ಮ ಜೀವಿಗಳಂಥವು) ಆಗಿರಬಹುದು.

 ಭೌತ ಮತ್ತು ರಾಸಾಯನಿಕ ಏಡಿಗಂತಿಜನಕಗಳು  
ಕ್ರಿಯಾಶೀಲ ಬೆಳಕು (ಆಕ್ಟಿನಿಕ್ ಲೈಟ್), ಎಕ್ಸ್‌ ಕಿರಣಗಳು, ರೇಡಿಯಂ (ಸಂಕ್ಷೇಪವಾಗಿ, ಅಯಾನೀಕರಿಸುವ ವಿಸರಣೆಯ ವಿವಿಧ ರೂಪಗಳು) ಭೌತ ಏಡಿಗಂತಿಜನಕಗಳು, ಮಾನವ ಕುಲವು ಪರಮಾಣುಯುಗದ ಹೊಸ್ತಿಲನ್ನು ದಾಟುತ್ತಿರುವುದರಿಂದ ಈ ಬಗೆಯ ವಿಸರಣೆಯಿಂದ ಆಗುವ ಅಪಾಯಗಳು ಹೆಚ್ಚು ಹೆಚ್ಚಾಗುತ್ತಿವೆ (ನೋಡಿ- ಏಡಿಗಂತಿಜನಕ-ರಾಸಾಯನಿಕಗಳು). 

 ಜೈವಿಕ ಏಡಿಗಂತಿಜನಕಗಳು  
ಸಾಮಾನ್ಯವಾಗಿ ಪ್ರಾಣಿಗಳಲ್ಲೂ ಸಸ್ಯಗಳಲ್ಲೂ ಏಡಿಗಂತಿಯನ್ನು ಉಂಟುಮಾಡುವ ವೈರಸುಗಳಿಗೆ ಸಾಕಷ್ಟು ನಿದರ್ಶನಗಳಿವೆ. ಈ ಅತಿ ಸೂಕ್ಷ್ಮಜೀವಿಗಳು ಬಲು ಸುಲಭವಾಗಿ ಕೋಶಗಳನ್ನು ಪ್ರವೇಶಿಸಿ ಅಲ್ಲಿ ಉಪಸ್ಥಿತವಾಗುವುವು; ತರುವಾಯ ಆ ಕೋಶಗಳ ಜೀವನವ್ಯಾಪಾರಗಳಲ್ಲಿ ತಲೆಹಾಕಿ ಅವನ್ನು ಮಾರ್ಪಡಿಸಿ ವಿಷಮ ವ್ಯತ್ಯಾಸಗಳನ್ನು ಉಂಟುಮಾಡುತ್ತವೆ; ಇವೇ ಮುಂದೆ ವಿಷಮಗಂತಿಗಳಾಗಿ ಏಡಿಗಂತಿಜನಕಗಳಾಗುತ್ತವೆ.                                 (ಸಿ.ಡಿ.)

 ಏಡಿಗಂತಿಜನಕ ರಾಸಾಯನಿಕಗಳು: 
ಜೀವಿಯ ದೇಹದಲ್ಲಿ ಏಡಿಗಂತಿಯನ್ನು (ಕ್ಯಾನ್ಸರ್) ಉಂಟುಮಾಡಬಲ್ಲ ರಾಸಾಯನಿಕಗಳು (ಕಾರ್ಸಿನ್ರೊಜೇನಿಕ್ ಕೆಮಿಕಲ್ಸ್‌). ದೇಹದ ಸಹಜ ಕೋಶಗಳಲ್ಲಿ ವಿವಿಧ ಬಗೆಯ ರಾಸಾಯನಿಕಗಳು ವಿಷಮ ಬದಲಾವಣೆ ಗಳನ್ನು ಉಂಟುಮಾಡಬಲ್ಲವು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ಬಗೆಯ ಏಡಿಗಂತಿಯ ಮಾರ್ಪಾಡುಗಳನ್ನು ಉಂಟುಮಾಡಬಲ್ಲ ರಾಸಾಯನಿಕಗಳೇ ಏಡಿಗಂತಿಜನಕ ರಾಸಾಯನಿಕಗಳು. ಏಡಿಗಂತಿ ಬಹುಕೋಶ ಜೀವಿಗಳಿಗೆ (ಮಲ್ಟಿಸೆಲ್ಲುಲರ್ ಅಗಾರ್ಯ್‌ನಿಸಮ್ಸ್‌) ಬರುವ ಒಂದು ಕಾಯಿಲೆ. ಜೀವಿಯ ಸಹಜ ಕೋಶಗಳೇ ಅವಾಸ್ತವಿಕರೂಪ ತಳೆದು ಅನಿಯಂತ್ರಿತ ವೃದ್ಧಿಹೊಂದುವಿಕೆ ಮತ್ತು ಜೀವಿಯಲ್ಲಿ ಹರಡುವಿಕೆ-ಇವು ಈ ಕಾಯಿಲೆಯ ಲಕ್ಷಣ. ಏಡಿಗಂತಿ ಒಂದು ಕಾಯಿಲೆ ಅಲ್ಲ; ಹಲವಾರು ಕಾರ್ಯಕಾರಣ ಸಂಬಂಧಗಳ (ಏಟಿಯಾಲಜಿ) ಪರಿಣಾಮವಾಗಿ ಉಂಟಾಗುವ ಹಲವಾರು ಕಾಯಿಲೆಗಳ ಒಂದು ಗುಂಪೇ ಆಗಿದೆ. ಆದ್ದರಿಂದ ಏಡಿಗಂತಿಯ ಬೆಳೆವಣಿಗೆಗೆ ಯಾವುದೇ ಒಂದು ವಿಶಿಷ್ಟ ಕಾರ್ಯಕಾರಣ ಸಂಬಂಧವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಇದುವರೆಗಿನ ಅನುಭವದ ಪ್ರಕಾರ ಏಡಿಗಂತಿಯ ಹಲವಾರು ನಮೂನೆಗಳಲ್ಲಿ ಬಹುಸಂಖ್ಯೆಯ ಕಾರ್ಯಕಾರಣ ಸಂಬಂಧಗಳು ಅಡಕವಾಗಿವೆಯೆಂದೂ ಇವುಗಳಲ್ಲಿ ಕೆಲವು ಇತರವುಗಳಿಗಿಂತ ಪ್ರಧಾನವಾಗಿವೆಯೆಂದೂ ತಿಳಿದಿವೆ. ಇಂಥವುಗಳಲ್ಲಿ ರಾಸಾಯನಿಕಗಳಿಂದ ಉತ್ಪನ್ನವಾಗುವ ಏಡಿಗಂತಿಗಳಿಗೆ (ಕಾರ್ಸಿನೋಜೆನಿಸಿಸ್) ಗಮನಾರ್ಹ ಸ್ಥಾನವಿದೆ.

ರಾಸಾಯನಿಕಜನ್ಯ ಏಡಿಗಂತಿಯನ್ನು ಮೊದಲು ಸೂಚಿಸಿದಾತ ಪರ್ಸಿವಾಲ್ ಪಾಟ್ (1775). ಹೊಗೆಕೊಳವೆಗಳಲ್ಲಿ ಕಟ್ಟಿಕೊಂಡಿದ್ದ ಕಿಟ್ಟ ತೆಗೆದು ಚೊಕ್ಕಪಡಿಸುತ್ತಿದ್ದ ಹುಡುಗರಲ್ಲಿ ತರಡಿನ ಏಡಿಗಂತಿ ಸಾಮಾನ್ಯವಾಗಿ ಏಳಲು ಹೊಗೆಕರಿ ಕಾರಣವಿರುವುದೆಂದು ಈತ ಬಗೆದ. 

ಕಾರ್ಖಾನೆಗಳ ಕೆಲಸಗಾರರಲ್ಲಿ ಕಂಡುಬರುವ ಚರ್ಮದ ಏಡಿಗಂತಿಯ (ಇಂಡಸ್ಟ್ರಿಯಲ್ ಸ್ಕೀನ್ ಕ್ಯಾನ್ಸರ್) ಕಾರಣ ಅಲ್ಲಿ ಚರ್ಮಕ್ಕೆ ತಾರೆಣ್ಣೆಯೊಡನೆ ಒದಗುವ ಸಂಪರ್ಕ ಎಂದು ಒಂದು ಶತಮಾನದ ತರುವಾಯ ವಾನ್ ವಾಲ್ಕ್‌ ಮ್ಯಾನ್ ಸೂಚಿಸಿದ (1875). ಶೇಲ್ ಎಣ್ಣೆಯ ಪರಿಣಾಮವಾಗಿ ಉಂಟಾಗುವ ಪ್ಯಾರಾಫಿನ್ ಏಡಿಗಂತಿಯನ್ನು (ಒಂದು ವರ್ಷದ ಅನಂತರ) ಶೋಧಿಸಿದಾತ ಬೆಲ್, ಕೈಗಾರಿಕೆಗಳು ಸರ್ವವ್ಯಾಪ್ತಿಯಾಗಿ ಬೆಳೆದಂತೆ ಖನಿಜದ ಎಣ್ಣೆ, ತಾರೆಣ್ಣೆ, ಹೊಗೆಕರಿ ಇವನ್ನೆಲ್ಲ ತಾಗಿಸಿಕೊಳ್ಳುವ ಕೆಲಸಗಾರರಲ್ಲಿ ಆ ಪರಿಣಾಮವಾಗಿ ಎದ್ದ ಗಂತಿಗಳು ಗಮನಕ್ಕೆ ಬಂದುವು.

ರಾಸಾಯನಿಕಗಳು ಏಡಿಗಂತಿಜನಕಗಳಾಗಬಹುದೆಂಬುದನ್ನು ಈ ಅನುಭವಗಳು ಸೂಚಿಸಿದುವು. ಆದರೆ ಈ ಭಾವನೆ ಖಚಿತವಾದದ್ದು ಯೋಮಗಾವ ಮತ್ತು ಇಚಿಕಾವ ಎಂಬ ವಿಜ್ಞಾನಿಗಳ 1915ರಲ್ಲಿ ಮಾಡಿದ ಸುಪ್ರಸಿದ್ಧ ಪರಿಶೋಧನೆಯಿಂದ-ಅವರು ಮೊಲಗಳ ಕಿವಿಗಳಿಗೆ ತಾರೆಣ್ಣೆ ಲೇಪಿಸಿ ಅಲ್ಲಿ ವಿಷಮಗಂತಿಗಳು (ಮ್ಯಾಲಿಗ್ನೆಂಟ್ ಟ್ಯೂಮರ್ಸ್) ಏಳುವುದನ್ನು ಗಮನಿಸಿದರು. ಮುಂದೆ 1918ರಲ್ಲಿ ಇದೇ ತೆರನ ಪ್ರಯೋಗದಿಂದ ಚಿಟ್ಟಿಲಿಗಳ (ಮೈಸ್) ಚರ್ಮದ ಮೇಲೆ ಗಂತಿಗಳನ್ನು ಉಂಟು ಮಾಡುವುದು ಸುಟ್ಲೂಯಿಗೆ ಸಾಧ್ಯವಾಯಿತು. ಇಂಥ ಪ್ರಯೋಗಗಳ ಪರಿಣಾಮವಾಗಿ ಟಾರೆಣ್ಣೆ, ಖನಿಜದ ಎಣ್ಣೆ ಮುಂತಾದವುಗಳಲ್ಲಿ ಇರುವ ಏಡಿಗಂತಿಜನಕ ರಾಸಾಯನಿಕ ಗಳನ್ನು ಬೇರ್ಪಡಿಸಿ ಅಭ್ಯಸಿಸಲು ಹೊಸ ಹುರುಪು ಬಂತು.

1933ರಲ್ಲಿ ಕುಕ್, ಕೆನ್ನವೇ ಮತ್ತು ಹೀಜರ್ ಎಂಬುವರು ಟಾರೆಣ್ಣೆಯಲ್ಲಿರುವ ಏಡಿಗಂತಿಜನಕ ಹೈಡ್ರೊಕಾರ್ಬನ್ನನ್ನು ಪ್ರತ್ಯೇಕಿಸಿ ಅದು 3-4 ಬೆಂಜೋ಼ಪೈರೀನ್ ಎಂದು ತೋರಿಸಿಕೊಟ್ಟರು. ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೊಕಾರ್ಬನ್ನುಗಳ ಗುಂಪಿಗೆ ಬೆಂಜೋ಼ಪೈರೀನ್ ಸೇರಿರುವುದರಿಂದ ಇಡೀ ಗುಂಪಿನ ವಿವಿಧ ಹೈಡ್ರೊಕಾರ್ಬನ್ನುಗಳ ಸಂಶ್ಲೇಷಣೆ ಹಾಗೂ ಪರೀಕ್ಷೆಗಳನ್ನು ನಡೆಸಲಾಯಿತು.

ಮಾನವನಿಗೆ ಆತನ ವೃತ್ತಿಗಳ ಕಾರಣವಾಗಿ ಉಂಟಾಗುವ ಅಪಾಯಗಳನ್ನು ರಾಸಾಯನಿಕ ಏಡಿಗಂತಿಜನಕಗಳ ಪರಿಶೀಲನೆಯಿಂದ ಗುರುತಿಸಲು ಸಾಧ್ಯವಾಗಿದೆ. ಮಾನವನ ಪರಿಸರದಲ್ಲಿ ಏಡಿಗಂತಿಜನಕಗಳಾಗಿ ರಾಸಾಯನಿಕಗಳು ವ್ಯಾಪಿಸಿರಬಹುದಾದುದರ ಪ್ರಾಮುಖ್ಯ ಈಗ ಮನದಟ್ಟಾಗಿದೆ. ಬಾಹ್ಯ ಪರಿಸರದಲ್ಲಿ ಮಾತ್ರವಲ್ಲ, ಆಹಾರಪದಾರ್ಥಗಳಲ್ಲಿ ಮತ್ತು ಅವುಗಳೊಡನೆ ಬೆರೆಯುವ ಇತರ ಪದಾರ್ಥಗಳಲ್ಲಿ ಸಹ ಏಡಿಗಂತಿಯನ್ನುಂಟು ಮಾಡುವಲ್ಲಿ ಮುಖ್ಯ ಪಾತ್ರವಹಿಸಬಹುದಾದ ತೀಕ್ಷ್ಣಸಂಯುಕ್ತಗಳು ಇರುತ್ತವೆ. ಈ ಸಂಗತಿ ಈಚೀಚೆಗೆ ಹೆಚ್ಚುಹೆಚ್ಚಾಗಿ ಖಚಿತವಾಗುತ್ತಿದೆ.

ರಾಸಾಯನಿಕ ಏಡಿಗಂತಿಜನಕಗಳನ್ನು ಪರಿಶೋಧಿಸಿದ್ದು ಮತ್ತು ಪರಿಶೋಧಿಸುತ್ತಿ ರುವುದು ಹೇಗೆ ಎಂಬುದನ್ನು ತಿಳಿಯುವುದು ಕುತೂಹಲಪ್ರದವಾಗಿದೆ. ಪರ್ಸಿವಾಲ್ ಪಾಟನ ಕಾಲದಲ್ಲಿ ಇದ್ದಹಾಗೆಯೇ ಇಂದು ಸಹ ಪರಿಸರದ ಪ್ರಭಾವದಿಂದ ಉಂಟಾಗುವ ಏಡಿಗಂತಿಗಳ ಮೇಲಿನ ಸಂಶೋಧನೆಗಳೇ ಗಮನ ಸೆಳೆಯುತ್ತ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ